Puru Vamshavruksha Family Tree Overview Image of Mahabharata

ಪೀಠಿಕೆ

ಭಾರತೀಯ ಸನಾತನ ಇತಿಹಾಸದ ಮಹಾಕಾವ್ಯವಾದ ಮಹಾಭಾರತದಲ್ಲಿ ಅನೇಕ ರಾಜವಂಶಗಳ ಉಲ್ಲೇಖ ಬರುತ್ತದೆ. ಅವುಗಳಲ್ಲಿ ಅತ್ಯಂತ ಪವಿತ್ರ ಹಾಗೂ ಪರಮ ಪರಾಕ್ರಮಿ ರಾಜರುಗಳಿಂದ ಕಂಗೊಳಿಸಿದ ವಂಶವೆಂದರೆ ಅದು ‘ಪುರುವಂಶ‘. ಮಹಾಭಾರತದ ಯುದ್ಧಕ್ಕೆ ಕಾರಣರಾದ ಕೌರವ ಮತ್ತು ಪಾಂಡವರೆಲ್ಲರೂ ಇದೇ ಮಹಾನ್ ವಂಶಕ್ಕೆ ಸೇರಿದವರು. ಬ್ರಹ್ಮದೇವನಿಂದ ಆರಂಭಗೊಂಡು ಕಲಿಯುಗದ ಆರಂಭದವರೆಗಿನ ಈ ಸುದೀರ್ಘ ವಂಶವೃಕ್ಷದ ರೋಚಕ ನಿರೂಪಣೆ ಇಲ್ಲಿದೆ.

ಸೃಷ್ಟಿಯ ಉಗಮ ಮತ್ತು ಯಯಾತಿ-ಪುರುವಿನ ಆಗಮನ

Puruvamsha of Mahabharata. The image depicts the Puru vamsha vruksha or family tree starting from Lord Brahma to King Puru

ವಿಶ್ವದ ಸೃಷ್ಟಿಕರ್ತನಾದ ನಾರಾಯಣನಿಂದ ಶಾಶ್ವತನೂ, ಅವ್ಯಯನೂ ಆದ ಬ್ರಹ್ಮದೇವನು ಜನಿಸಿದನು. ಸೃಷ್ಟಿಕಾರ್ಯವನ್ನು ಮುಂದುವರಿಸಲು ಬ್ರಹ್ಮನು ತನ್ನ ಹೆಬ್ಬೆರಳಿನಿಂದ ದಕ್ಷ ಪ್ರಜಾಪತಿಯನ್ನು ಹಾಗೂ ತನ್ನ ನೇತ್ರಗಳಿಂದ ಮರೀಚಿ ಮಹರ್ಷಿಯನ್ನು ಸೃಷ್ಟಿಸಿದನು. 

ತದನಂತರ ಮರೀಚಿಯ ಮಗನಾಗಿ ಕಶ್ಯಪರು ಮತ್ತು ದಕ್ಷನ ಮಗಳಾಗಿ ಅದಿತಿ ಜನಿಸಿದರು.

ಕಶ್ಯಪ ಮತ್ತು ಅದಿತಿ ದಂಪತಿಗಳ ಮಗನೇ ವಿವಸ್ವಂತ (ಸೂರ್ಯ). 

ಈ ವಿವಸ್ವಂತನಿಗೆ ಮನು ಎಂಬ ಪುತ್ರನಿದ್ದನು. 

ಮನುವಿನ ಮಗಳು ಇಳಾ

ಈ ಇಳಾಳ ಮಗನೇ ಪುರೂರವ

ವಂಶಾವಳಿ ಮುಂದುವರಿದು ಪುರೂರವನಿಗೆ ಆಯು ಎಂಬ ಮಗನೂ, ಆಯುವಿಗೆ ನಹುಷನೂ ಜನಿಸಿದರು. ಈ ನಹುಷನ ಪುತ್ರನೇ ಪ್ರಖ್ಯಾತ ರಾಜ ಯಯಾತಿ.

ರಾಜ ಯಯಾತಿಗೆ ಇಬ್ಬರು ಪತ್ನಿಯರಿದ್ದರು. ಶುಕ್ರಾಚಾರ್ಯರ ಪುತ್ರಿಯಾದ ದೇವಯಾನಿ ಒಬ್ಬಳಾದರೆ, ವೃಷಪರ್ವನ ಮಗಳಾದ ಶರ್ಮಿಷ್ಠೆ ಇನ್ನೊಬ್ಬಳು. 

ಇವರಲ್ಲಿ ದೇವಯಾನಿಗೆ ಯದು ಮತ್ತು ತುರ್ವಶು ಎಂಬ ಇಬ್ಬರು ಮಕ್ಕಳಾದರು. 

ಶರ್ಮಿಷ್ಠೆಗೆ ದ್ರುಹ್ಯು, ಅನು ಮತ್ತು ಪುರು ಎಂಬ ಮೂವರು ಪುತ್ರರು ಜನಿಸಿದರು. 

ಈ ಇಬ್ಬರು ಪತ್ನಿಯರ ಮಕ್ಕಳಲ್ಲಿ ಯದುವಿನಿಂದ ಯಾದವ ವಂಶವು ಪ್ರಸಿದ್ಧಿಗೆ ಬಂದರೆ, ಪುರುವಿನಿಂದ ಪ್ರಸಿದ್ಧವಾದ ‘ಪುರುವಂಶ‘ ಜನ್ಮತಾಳಿತು.  

ಪುರುವಿನಿಂದ ಭರತ ಚಕ್ರವರ್ತಿಯವರೆಗೆ

Puruvamsha of Mahabharata. Puru vamsha vruksha or family tree from King Puru to King Bharata

ಪುರು ಮಹಾರಾಜನ ಧರ್ಮಪತ್ನಿ ಕೋಸಲ ದೇಶದ ರಾಜಕುಮಾರಿ ಕೌಸಲ್ಯ ಜನಮೇಜಯನಿಗೆ ಜನ್ಮ ನೀಡಿದಳು. 

ಜನಮೇಜಯನ ಪತ್ನಿ ಸುನಂದೆ; ಇವರಿಬ್ಬರ ಮಗನೇ ಪ್ರಾಚೀನ್ವಾನ್

ಪ್ರಾಚೀನ್ವಾನನ ಹೆಂಡತಿ ಸುಷ್ಠುವಾ, ಇವರ ಮಗ ಶಯ್ಯಾತಿ

ಶಯ್ಯಾತಿಯ ಹೆಂಡತಿ ತ್ರಿಶಂಕುವಿನ ಮಗಳಾದ ವರಾಂಗಿ ಮತ್ತು ಇವರ ಮಗ ಅಹಂಪಾತಿ.

ವಂಶ ಮುಂದುವರಿದು ಅಹಂಪಾತಿಯ ಪತ್ನಿ ಕೃತವೀರ್ಯನ ಮಗಳಾದ ಭಾನುಮತಿ ಸಾರ್ವಭೌಮನಿಗೆ ಜನ್ಮ ನೀಡಿದಳು. 

ಸಾರ್ವಭೌಮನ ಹೆಂಡತಿ ಸುಂದರಿ, ಇವರ ಪುತ್ರ ಜಯತ್ಸೇನ

ಜಯತ್ಸೇನನ ಪತ್ನಿ ಸುಶ್ರವಳ ಮಗನೇ ಅಪರಾಚೀನ

ಅಪರಾಚೀನನ ಪತ್ನಿ ಮರ್ಯಾದಾ ಇವಳ ಮಗ ಋಕ್ಷ

ಋಕ್ಷನ ಹೆಂಡತಿ ವಾಮದೇವಿ ಮತ್ತು ಇವರ ಪುತ್ರ ಋಕ್ಷ ಎಂದೇ. 

ಋಕ್ಷನ ಪತ್ನಿ ತಕ್ಷಕನ ಮಗಳಾದ ಜ್ವಲಂತಿ, ಇವರ ಮಗ ಅಂತಿನಾರ.

ಅಂತಿನಾರನು ಸರಸ್ವತಿ ನದಿಯ ತೀರದ ಕನ್ಯೆಯನ್ನು ವರಿಸಿ ತ್ರಸು ಎಂಬ ಮಗನನ್ನು ಪಡೆದನು. 

ತ್ರಸುವಿನ ಪತ್ನಿ ಕಾಳಿಂದಿ, ಇವರ ಪುತ್ರ ಇಲಿಲ

ಈ ಇಲಿಲನ ಮಗನೇ ಪ್ರಖ್ಯಾತ ರಾಜ ದುಷ್ಯಂತ. ರಾಜ ದುಷ್ಯಂತನು ವಿಶ್ವಾಮಿತ್ರ ಮಹರ್ಷಿಗಳ ಮಗಳಾದ ಶಕುಂತಲೆಯನ್ನು ಗಂಧರ್ವ ವಿವಾಹವಾಗಿ ಭರತನನ್ನು ಪಡೆದನು. 

ಈ ಭರತ ಚಕ್ರವರ್ತಿಯ ಹೆಸರಿನಿಂದಲೇ ನಮ್ಮ ದೇಶಕ್ಕೆ ‘ಭಾರತವರ್ಷ‘ ಎಂಬ ಹೆಸರು ಬಂದಿತು. 

ಭರತ ಚಕ್ರವರ್ತಿ ವಿಚಿತ್ರವೀರ್ಯಯವರೆಗೆ

Puruvamsha of Mahabharata. Puru vamsha vruksha or family tree from King Bharatha to vichitravirya

ಭರತನ ಪತ್ನಿ ಕಾಶೀರಾಜನ ಮಗಳಾದ ಸುನಂದೆ ಭುಮನ್ಯುವಿಗೆ ಜನ್ಮ ನೀಡಿದಳು. 

ಭುಮನ್ಯುವಿನ ಹೆಂಡತಿ ದಾಶಾರ್ಹಪತಿಯ ಮಗಳಾದ ಸುಪರ್ಣಾಳ ಮಗ ಸುಹೋತ್ರ

ಸುಹೋತ್ರನ ಪತ್ನಿ ಇಕ್ಷ್ವಾಕು ವಂಶದ ಜಯಂತಿ ಇವಳ ಮಗ ಹಸ್ತಿ. ಈ ಹಸ್ತಿ ಮಹಾರಾಜನೇ ಪ್ರಸಿದ್ಧ ‘ಹಸ್ತಿನಾಪುರ‘ ಸಾಮ್ರಾಜ್ಯವನ್ನು ನಿರ್ಮಿಸಿದವನು. 

ಹಸ್ತಿಯ ಪತ್ನಿ ತ್ರಿಗರ್ತ ದೇಶದ ಯಶೋಧರೆ, ಇವರ ಮಗ ವಿಕುಂಜನ. 

ವಿಕುಂಜನನ ಹೆಂಡತಿ ದಾಶಾರ್ಹ ದೇಶದ ವಂದೆ, ಇವರ ಪುತ್ರ ಅಜಮೀಢ

ಅಜಮೀಢನ ಹೆಂಡತಿ ಋಕ್ಷೆ, ಇವರ ಮಗ ಸಂವರಣ

ಸಂವರಣನ ಪತ್ನಿ ತಪತಿ (ಸೂರ್ಯನ  ಮಗಳು), ಇವರ ಮಗನೇ ಕುರು ಮಹಾರಾಜ. ಇವನ ಹೆಸರಿನಿಂದಲೇ ಈ ವಂಶಕ್ಕೆ ‘ಕುರುವಂಶ‘ ಎಂದೂ, ಈ ಕ್ಷೇತ್ರಕ್ಕೆ ‘ಕುರುಕ್ಷೇತ್ರ’ ಎಂದೂ ಹೆಸರಾಯಿತು.

ಕುರುವಿನ ಪತ್ನಿ ದಾಶಾರ್ಹ ದೇಶದ ಶುಭಾಂಗಿ ವಿಡೂರಥನಿಗೆ ಜನ್ಮ ನೀಡಿದಳು. 

ವಿಡೂರಥನ ಪತ್ನಿ ಸಂಪ್ರಿಯೆ ಇವಳ ಮಗ ಅನಶ್ವಾನ್

ಅನಶ್ವಾನನ ಪತ್ನಿ ಸುವೇಷೆ ಇವಳ ಮಗ ಪರೀಕ್ಷಿತ

ಪರೀಕ್ಷಿತನ ಪತ್ನಿ ಬಾಹುಕ ದೇಶದ ಅಮೃತೆ ಭೀಮಸೇನನಿಗೆ ಜನ್ಮ ನೀಡಿದಳು. 

ಭೀಮಸೇನನ ಪತ್ನಿ ಕೇಕಯ ದೇಶದ ಸುಕುಮಾರಿ, ಇವಳ ಮಗ ಪರ್ಯಶ್ರವ (ಇವನಿಗೆ ಪ್ರತೀಪ ಎಂಬ ಇನ್ನೊಂದು ಹೆಸರಿತ್ತು).

ಪ್ರತೀಪನ ಪತ್ನಿ ರಾಜಕುಮಾರಿ ಸುನಂದೆ. ಇವರಿಗೆ ದೇವಾಪಿ, ಶಂತನು ಮತ್ತು ಬಾಹ್ಲೀಕ ಎಂಬ ಮೂವರು ಮಕ್ಕಳಾದರು. 

ಇವರಲ್ಲಿ ಶಂತನು ಮಹಾರಾಜನು ಗಂಗಾದೇವಿಯನ್ನು ವಿವಾಹವಾಗಿ ದೇವವ್ರತನನ್ನು ಪಡೆದನು. ಈ ದೇವವ್ರತನೇ ಮುಂದೆ ಮಹಾಭಾರತದ ಭೀಷ್ಮ ಪಿತಾಮಹನೆಂದು ಪ್ರಸಿದ್ಧನಾದನು. 

ತದನಂತರ ಶಂತನು ಮಹಾರಾಜನು ಸತ್ಯವತಿಯನ್ನು ಮದುವೆಯಾಗಿ ಚಿತ್ರಾಂಗದ ಮತ್ತು ವಿಚಿತ್ರವೀರ್ಯ ಎಂಬ ಇಬ್ಬರು ಮಕ್ಕಳನ್ನು ಪಡೆದನು.

 

ಸತ್ಯವತಿಯ ವಂಶಾವಳಿ

Puruvamsha of Mahabharata. Puru vamsha vruksha from Satyavati to Pandavas and Kauravas

ಪಾಂಡವರ ಜನನದ ರಹಸ್ಯ

ಸತ್ಯವತಿಯು ಶಂತನುವನ್ನು ಮದುವೆಯಾಗುವುದಕ್ಕಿಂತ ಮುಂಚೆ ಕನ್ಯಾವಸ್ಥೆಯಲ್ಲಿದ್ದಾಗ ಪರಾಶರ ಮಹರ್ಷಿಗಳಿಂದ ವೇದವ್ಯಾಸರನ್ನು ಪುತ್ರನನ್ನಾಗಿ ಪಡೆದಿದ್ದಳು.

ಶಂತನು ಮತ್ತು ಸತ್ಯವತಿಯ ಮಕ್ಕಳಾದ ಚಿತ್ರಾಂಗದ ಮತ್ತು ವಿಚಿತ್ರವೀರ್ಯರಲ್ಲಿ, ಚಿತ್ರಾಂಗದನು ಯೌವನಾವಸ್ಥೆಗೆ ಬರುವ ಮೊದಲೇ ಗಂಧರ್ವನಿಂದ ಹತನಾದನು. ಆದುದರಿಂದ ವಿಚಿತ್ರವೀರ್ಯನು ರಾಜನಾದನು.

ವಿಚಿತ್ರವೀರ್ಯನು ಕಾಶೀರಾಜನ ಪುತ್ರಿಯರಾದ ಅಂಬಿಕೆ ಮತ್ತು ಅಂಬಾಲಿಕೆಯರನ್ನು ವಿವಾಹವಾದನು. ಆದರೆ ದುರದೃಷ್ಟವಶಾತ್ ಇಬ್ಬರು ಪತ್ನಿಯರಲ್ಲಿ ಮಕ್ಕಳನ್ನು ಪಡೆಯುವ ಮುನ್ನವೇ ವಿಚಿತ್ರವೀರ್ಯನು ಮರಣ ಹೊಂದಿದನು.

ಆಗ ಸತ್ಯವತಿಯು ಶಂತನುವಿನ ವಂಶವು ಇಲ್ಲದಂತಾಗಬಾರದೆಂದು ಚಿಂತಿಸಿ, ತನ್ನ ಮೊದಲ ಮಗನಾದ ವೇದವ್ಯಾಸರನ್ನು ನೆನೆದಳು. ವ್ಯಾಸರು ಪ್ರತ್ಯಕ್ಷರಾದಾಗ, ಸತ್ಯವತಿಯು ಪರಿಸ್ಥಿತಿಯನ್ನು ವಿವರಿಸಿ, ವಂಶದ ಉದ್ಧಾರಕ್ಕಾಗಿ ಅಂಬಿಕೆ ಮತ್ತು ಅಂಬಾಲಿಕೆಯರಿಗೆ ಸಂತಾನ ಕರುಣಿಸುವಂತೆ ಕೋರಿದಳು. 

ಅದರಂತೆ ವ್ಯಾಸ ಮಹರ್ಷಿಗಳಿಂದ ಧೃತರಾಷ್ಟ್ರ, ಪಾಂಡು ಮತ್ತು ವಿದುರ ಎಂಬ ಮೂವರು ಮಕ್ಕಳು ಜನಿಸಿದರು.

ಧೃತರಾಷ್ಟ್ರನು ಗಾಂಧಾರಿಯನ್ನು ವಿವಾಹವಾದನು. ಗಾಂಧಾರಿಗೆ ವರದ ಬಲದಿಂದ ನೂರು ಜನ ಪುತ್ರರು ಜನಿಸಿದರು. ಇವರಲ್ಲಿ ದುರ್ಯೋಧನ, ದುಶ್ಶಾಸನ, ವಿಕರ್ಣ ಮತ್ತು ಚಿತ್ರಸೇನ ಪ್ರಮುಖರಾಗಿದ್ದರು. 

ಇತ್ತ ಪಾಂಡು ಮಹಾರಾಜನಿಗೆ ಕುಂತಿ ಮತ್ತು ಮಾದ್ರಿ ಎಂಬ ಇಬ್ಬರು ಪತ್ನಿಯರಿದ್ದರು.

ಒಮ್ಮೆ ಪಾಂಡು ಮಹಾರಾಜನು ಕಾಡಿನಲ್ಲಿ ಬೇಟೆಯಾಡುತ್ತಿದ್ದಾಗ, ಮೈಥುನ ನಿರತನಾಗಿದ್ದ ಋಷಿಯೊಬ್ಬನಿಗೆ ತಿಳಿಯದೇ ಬಾಣ ಹೂಡಿದನು. ಆ ಋಷಿಯು ಮರಣಿಸುವ ಮುನ್ನ ಪಾಂಡುವಿಗೆ, “ನೀನು ನಿನ್ನ ಪತ್ನಿಯರ ಸಮೀಪಕ್ಕೆ ಹೋದರೆ ಮರಣ ಹೊಂದುತ್ತೀಯ” ಎಂದು ಶಾಪ ನೀಡಿದನು. ಇದರಿಂದ ದುಃಖಿತನಾದ ಪಾಂಡು ತನಗೆ ಸಂತಾನವಿಲ್ಲದ್ದಕ್ಕೆ ಕೊರಗತೊಡಗಿದನು. 

ಆಗ ಅವನು ಕುಂತಿಗೆ ಬೇರೆಯವರಿಂದ ಸಂತಾನ ಪಡೆಯಲು ಅನುಮತಿ ನೀಡಿದನು. ಕುಂತಿಯು ತನಗೆ ದೂರ್ವಾಸ ಮುನಿಗಳು ನೀಡಿದ್ದ ಮಂತ್ರದ ಶಕ್ತಿಯಿಂದ ಯಮನಿಂದ ಯುಧಿಷ್ಠಿರ (ಧರ್ಮರಾಯ), ವಾಯುದೇವನಿಂದ ಭೀಮಸೇನ ಮತ್ತು ದೇವೇಂದ್ರನಿಂದ ಅರ್ಜುನನನ್ನು ಪುತ್ರರನ್ನಾಗಿ ಪಡೆದಳು.

ಮಾದ್ರಿಗೂ ಆ ಮಂತ್ರವನ್ನು ಉಪದೇಶಿಸಿದಾಗ, ಅವಳು ಅಶ್ವಿನಿ ದೇವತೆಗಳಿಂದ ನಕುಲ ಮತ್ತು ಸಹದೇವ ಎಂಬ ಅವಳಿ ಮಕ್ಕಳನ್ನು ಪಡೆದಳು. 

ಹೀಗೆ ಪಂಚ ಪಾಂಡವರ ಜನನವಾಯಿತು. ಒಂದು ದಿನ ಪಾಂಡು ಮಹಾರಾಜನು ಕಾಮವಶನಾಗಿ ಮಾದ್ರಿಯ ಸಮೀಪಕ್ಕೆ ಹೋದಾಗ ಶಾಪದ ಪ್ರಭಾವದಿಂದ ಮರಣ ಹೊಂದಿದನು. ಮಾದ್ರಿಯು ಪತಿಯ ಚಿತೆಯನ್ನೇರಿ ಸಹಗಮನ ಮಾಡಿದಳು. 

ಹಸ್ತಿನಾಪುರದ ಘಟನೆಗಳು ಮತ್ತು ದ್ರೌಪದಿಯ ಸಂತಾನ

puru vamshavruksha pandavas lineaage

ಪಾಂಡುವಿನ ಮರಣದ ನಂತರ ಮುನಿಗಳು ಐದೂ ಜನ ಪಾಂಡವರನ್ನು ಹಸ್ತಿನಾಪುರಕ್ಕೆ ಕರೆತಂದು ಭೀಷ್ಮ, ಧೃತರಾಷ್ಟ್ರ ಮತ್ತು ವಿದುರನಿಗೆ ಒಪ್ಪಿಸಿ, ಪಾಂಡುವಿನ ಮರಣದ ವೃತ್ತಾಂತವನ್ನು ವಿವರಿಸಿದರು. ಧೃತರಾಷ್ಟ್ರನ ಮಗನಾದ ದುರ್ಯೋಧನನು ಪಾಂಡವರ ಏಳಿಗೆಯನ್ನು ಸಹಿಸದೆ, ಅವರನ್ನು ಕುಂತಿಯೊಂದಿಗೆ ಅರಗಿನ ಮನೆಯಲ್ಲಿ (ಲಾಕ್ಷಾಗೃಹ) ಸುಟ್ಟು ಹಾಕಲು ಸಂಚು ರೂಪಿಸಿದನು. ಆದರೆ ವಿದುರನ ಸಮಯಪ್ರಜ್ಞೆಯಿಂದ ಪಾಂಡವರು ಸುರಕ್ಷಿತವಾಗಿ ತಪ್ಪಿಸಿಕೊಂಡರು.

ಅಲ್ಲಿಂದ ತಪ್ಪಿಸಿಕೊಂಡು ಕಾಡಿಗೆ ಹೋದಾಗ, ಭೀಮಸೇನನು ಹಿಡಿಂಬನೆಂಬ ರಾಕ್ಷಸನನ್ನು ಕೊಂದು, ಅವನ ತಂಗಿ ಹಿಡಿಂಬೆಯನ್ನು ವಿವಾಹವಾಗಿ ಘಟೋತ್ಕಚನೆಂಬ ಪರಾಕ್ರಮಿ ಮಗನನ್ನು ಪಡೆದನು.

ತದನಂತರ ಪಾಂಡವರು ಪಾಂಚಾಲ ದೇಶಕ್ಕೆ ತೆರಳಿ ಸ್ವಯಂವರದಲ್ಲಿ ದ್ರೌಪದಿಯನ್ನು ವರಿಸಿ ಹಸ್ತಿನಾಪುರಕ್ಕೆ ಮರಳಿದರು. ಅಲ್ಲಿ ಅವರಿಗೆ ಅರ್ಧ ರಾಜ್ಯ ಸಿಕ್ಕಿತು ಮತ್ತು ಅವರು ಇಂದ್ರಪ್ರಸ್ಥವನ್ನು ರಾಜಧಾನಿಯನ್ನಾಗಿ ಮಾಡಿಕೊಂಡರು. ದ್ರೌಪದಿಯಿಂದ ಐದೂ ಜನ ಪಾಂಡವರಿಗೆ ತಲಾ ಒಬ್ಬೊಬ್ಬರಂತೆ ಐದು ಮಕ್ಕಳು ಜನಿಸಿದರು:

ಯುಧಿಷ್ಠಿರನ ಮಗ – ಪ್ರತಿವಿಂಧ್ಯ

ಭೀಮಸೇನನ ಮಗ – ಸುತಸೋಮ

ಅರ್ಜುನನ ಮಗ – ಶ್ರುತಕೀರ್ತಿ

ನಕುಲನ ಮಗ – ಶತಾನೀಕ

ಸಹದೇವನ ಮಗ – ಶ್ರುತಕರ್ಮ

ಇದಲ್ಲದೆ ಯುಧಿಷ್ಠಿರನು ಶಿಬಿರಾಜನ ಮಗಳಾದ ದೇವಕಿಯನ್ನು ಮದುವೆಯಾಗಿ ಯೌಧೇಯನೆಂಬ ಮಗನನ್ನು ಪಡೆದನು. 

ಭೀಮಸೇನನು ಕಾಶಿರಾಜನ ಮಗಳಾದ ಬಲಧಾರೆಯನ್ನು ಸ್ವಯಂವರದಲ್ಲಿ ವರಿಸಿ ಸರ್ವತ್ರನೆಂಬ ಮಗನನ್ನು ಪಡೆದನು.

 

ಅರ್ಜುನನ ವಿವಾಹಗಳು ಮತ್ತು ಪರೀಕ್ಷಿತ ರಾಜನ ಉಗಮ

ಪಾಂಡವರಲ್ಲಿ ಪರಾಕ್ರಮಿಯಾದ ಅರ್ಜುನನು ದ್ವಾರಾವತಿಗೆ (ದ್ವಾರಕೆ) ಭೇಟಿ ನೀಡಿ, ಭಗವಾನ್ ಶ್ರೀಕೃಷ್ಣನ ತಂಗಿಯಾದ ಸುಭದ್ರೆಯನ್ನು ವಿವಾಹವಾಗಿ ಅಭಿಮನ್ಯು ಎಂಬ ವೀರ ಪುತ್ರನನ್ನು ಪಡೆದನು. 

ಅರ್ಜುನನು ನಾಗಕನ್ಯೆಯಾದ ಉಲೂಪಿಯನ್ನು ವರಿಸಿ ಇರಾವಂತನೆಂಬ ಮಗನನ್ನು, ಹಾಗೂ ಮಣಿಪೂರದ ರಾಜಕುಮಾರಿ ಚಿತ್ರಾಂಗದೆಯನ್ನು ಮದುವೆಯಾಗಿ ಬಭ್ರುವಾಹನನೆಂಬ ಮಗನನ್ನು ಪಡೆದನು.

ನಕುಲನು ಚೇದಿ ದೇಶದ ರಾಜಕುಮಾರಿ ರೇಣುಮತಿಯನ್ನು ವಿವಾಹವಾಗಿ ನಿರಮಿತ್ರ ಎಂಬ ಪುತ್ರನನ್ನು ಪಡೆದರೆ, ಸಹದೇವನು ಮದ್ರ ದೇಶದ ರಾಜಕುಮಾರಿ ವಿಜಯಾಳನ್ನು ಮದುವೆಯಾಗಿ ಸುಹೋತ್ರನೆಂಬ ಮಗನನ್ನು ಪಡೆದನು. ಹೀಗೆ ಪಾಂಡವರ ಒಟ್ಟು ಮಕ್ಕಳ ಸಂಖ್ಯೆ ಹದಿಮೂರು.

ಮುಂದೆ, ಅಭಿಮನ್ಯುವು ವಿರಾಟ ರಾಜನ ಮಗಳಾದ ಉತ್ತರೆಯ ಜೊತೆ ವಿವಾಹವಾದನು. ಆದರೆ ಕುರುಕ್ಷೇತ್ರ ಯುದ್ಧದಲ್ಲಿ ಅಭಿಮನ್ಯು ವೀರಮರಣ ಹೊಂದಿದನು. ಉತ್ತರೆಯು ಗರ್ಭಿಣಿಯಾಗಿದ್ದಾಗ ಅಶ್ವತ್ಥಾಮನ ಬ್ರಹ್ಮಾಸ್ತ್ರದ ಪ್ರಭಾವದಿಂದ ಅವಳಿಗೆ ಮೃತ ಮಗು ಜನಿಸಿತು. ಆಗ ಕುಂತಿಯು ಆ ಮಗುವನ್ನು ಶ್ರೀಕೃಷ್ಣನ ತೊಡೆಯ ಮೇಲೆ ಇಟ್ಟು ರಕ್ಷಿಸುವಂತೆ ಬೇಡಿದಳು. ಶ್ರೀಕೃಷ್ಣನು ತನ್ನ ದಿವ್ಯ ಶಕ್ತಿಯಿಂದ ಆ ಮಗುವಿಗೆ ಮರುಜೀವ ನೀಡಿದನು. ಸುಭದ್ರೆಯು ಆ ಮಗುವಿಗೆ ‘ಪರೀಕ್ಷಿತ‘ ಎಂದು ನಾಮಕರಣ ಮಾಡಿದಳು. 

ಈ ಪರೀಕ್ಷಿತನೇ ಮುಂದೆ ಕುರುವಂಶದ ಏಕೈಕ ವಾರಸುದಾರನಾದನು. 

ಪರೀಕ್ಷಿತ ಮಹಾರಾಜನು ಮುದ್ರವತಿಯನ್ನು ವಿವಾಹವಾಗಿ ಜನಮೇಜಯನೆಂಬ ಮಗನನ್ನು ಪಡೆದನು. 

ಈ ಜನಮೇಜಯನು ವಪುಷ್ಟಮೆಯನ್ನು ಮದುವೆಯಾಗಿ ಶತಾನೀಕ ಮತ್ತು ಶಂಖ ಎಂಬ ಇಬ್ಬರು ಮಕ್ಕಳನ್ನು ಪಡೆದನು. 

ಪುರುವಂಶದ ಮುಕ್ತಾಯ ಮತ್ತು ಇದರ ಶ್ರವಣ ಫಲ

ವಂಶಾವಳಿಯ ಕೊನೆಯ ಹಂತದಲ್ಲಿ ಶತಾನೀಕನು ವೈದೇಹಿಯನ್ನು ವಿವಾಹವಾಗಿ ಅವಳಲ್ಲಿ ಅಶ್ವಮೇಧದತ್ತ ಎಂಬ ಮಗನನ್ನು ಪಡೆದನು.

ಇಲ್ಲಿಗೆ ಪುರು ಮಹಾರಾಜ ಹಾಗೂ ಪಾಂಡವರ ಪರಮ ಪವಿತ್ರವಾದ ವಂಶಾವಳಿ ಸಂಪೂರ್ಣಗೊಳ್ಳುತ್ತದೆ. ಮಹಾಭಾರತದ ಪ್ರಕಾರ, ಯಾರು ಈ ಪುರುವಂಶದ ಪವಿತ್ರ ಇತಿಹಾಸವನ್ನು ಭಕ್ತಿಯಿಂದ ಶ್ರವಣ ಮಾಡುತ್ತಾರೋ ಅಥವಾ ಓದುತ್ತಾರೋ, ಅವರು ತಮ್ಮೆಲ್ಲಾ ಪಾಪಗಳಿಂದ ಮುಕ್ತರಾಗುತ್ತಾರೆ ಎಂಬ ನಂಬಿಕೆಯಿದೆ.

ಓದುಗರಿಗೆ ಧನ್ಯವಾದಗಳು!

ಮಹಾಭಾರತದ ರೋಚಕ ಇತಿಹಾಸ ಮತ್ತು ವಂಶಾವಳಿಗಳ ಕುರಿತು ಇನ್ನಷ್ಟು ಆಳವಾದ ಮಾಹಿತಿಗಾಗಿ ನಮ್ಮ ವೆಬ್‌ಸೈಟ್ saaraamsh.com ಅನ್ನು ನಿರಂತರವಾಗಿ ಸಂದರ್ಶಿಸಿ. ಈ ಲೇಖನ ನಿಮಗೆ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ! 

Puru Vamshavruksha Family Tree Overview Image of Mahabharata

ಪುರುವಂಶ ನಿರೂಪಣೆ

ಪೀಠಿಕೆ ಭಾರತೀಯ ಸನಾತನ ಇತಿಹಾಸದ ಮಹಾಕಾವ್ಯವಾದ ಮಹಾಭಾರತದಲ್ಲಿ ಅನೇಕ ರಾಜವಂಶಗಳ ಉಲ್ಲೇಖ ಬರುತ್ತದೆ....

Read More

What do you feel about this post?

0%
like

Like

0%
love

Love

0%
happy

Happy

0%
care

Care